top of page
HCM

ಗತವೈಭವದ ನೆನಪಿನಲ್ಲಿ ಸುರಸದ್ಮಗಿರಿ

ಗುಡಿಬಂಡೆಯ ಮುಕುಟದಂತಿರುವ ಸುರಸದ್ಮಗಿರಿ ಪ್ರವಾಸಿಗರಿಗೆ ಹಾಗೂ ಚಾರಣಪ್ರಿಯರಿಗೆ ಉತ್ತಮ ವಿಹಾರಧಾಮ. ಗತಿಸಿದ ಇತಿಹಾಸ ಪುರಾಣಗಳನ್ನು ಘನೀಕರಿಸಿ, ಭೂತಕಾಲದ ವೈಭವವನ್ನು ಸ್ಮರಿಸುತ್ತಾ, ಸ್ಮಾರಕವಾಗಿಯಾದರೂ ಉಳಿಯಲು ಬಿಡದ ವರ್ತಮಾನವನ್ನು ಶಪಿಸುತ್ತಾ, ಭವಿಷ್ಯದ ಭಯಂಕರತೆಯನ್ನು ಊಹಿಸಿಕೊಂಡು ಸೊರಗುತ್ತಾ ಚಿಂತಿಸುತ್ತಿದೆ ಸುರಸದ್ಮಗಿರಿ.

ಪಂಚಗಿರಿಗಳ ಮಧ್ಯದಲ್ಲಿ ಇರುವ ಚಿಕ್ಕ ಊರು #ಗುಡಿಬಂಡೆ. ಈ ಹೆಸರು ಬರಲು ಕಾರಣ, ಇಲ್ಲಿ ಗುಡ್ಡದ ಶ್ರೀನರಸಿಂಹದೇವರ ದೇವಸ್ಥಾನಕ್ಕೆ ಹಿರಿದಾದ ಬಂಡೆಯೇ ಮೇಲ್ಚಾವಣಿಯಾಗಿರುವುದು. ಗುಡಿಯ ಮೇಲೊಂದು ಬಂಡೆ ಅದಕ್ಕಾಗಿ ಇದು ಗುಡಿಬಂಡೆ ಎಂದು ಕವಿ ಶ್ರೀ ಮಲ್ಲಿ ಭಾಗವತ ರಾಮಯ್ಯ ಹಾಡಿದ್ದಾರೆ.


ಗುಡಿಬಂಡೆಗೆ ಬರುವ ಮೊದಲೇ 15 ಕಿ.ಮೀ ದೂರದಿಂದಲೇ ಕಾಣಿಸುತ್ತದೆ ಭವ್ಯ ಕೋಟೆಯ ಸುರಸದ್ಮಗಿರಿ.


ವೈಶಿಷ್ಟ್ಯಗಳ ಆಗರ ಈ ಗಿರಿ


#ಸುರಸದ್ಮಗಿರಿ ಬಹಳಷ್ಟು ಇತಿಹಾಸ ಹೊಂದಿದ್ದು ಈ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಕೂಡ ಉಲ್ಲೇಖವಿರುವುದು ಕೆಲವು ತಾಳೆ ಓಲೆಗಳ ಗ್ರಂಥಗಳಿಂದ ತಿಳಿದು ಬಂದಿದೆ. ಇದರಂತೆ ರೋಮ ಋಷಿ ಮತ್ತು ಯುಧಿಷ್ಠಿರನ ನಡುವಿನ ಸಂವಾದವನ್ನು ಸುರಸದ್ಮಗಿರಿ ಮಹಾತ್ಮೆ ಎಂದು ಹೆಸರಿಸಲಾಗಿದೆ. #ಸುರ ಎಂದರೆ ದೇವತೆಗಳೆಂದೂ #ಸದ್ಮ ಎಂದರೆ ನಿವಾಸ ಎಂದು ಅರ್ಥ ಇರುವುದರಿಂದ, ಸುರಸದ್ಮಗಿರಿಯನ್ನು ದೇವತೆಗಳು ವಾಸಿಸುವ ಸ್ಥಳ ಎಂದು ಅರ್ಥೈಸಬಹುದು. ಸ್ಥಳಪುರಾಣದ ಪ್ರಕಾರ, ಎದುರಿನಲ್ಲಿಯೇ ಇರುವ ವಿದ್ಯಾಗಿರಿಯಲ್ಲಿ ಗುರುಕುಲಗಳನ್ನು ಋಷಿಮುನಿಗಳು ನಡೆಸುತ್ತಿದ್ದರೆನ್ನಲಾಗಿದೆ.


ಸುರಸದ್ಮಗಿರಿಯಲ್ಲಿ ಒಟ್ಟು13 ದೊಣೆಗಳು (ಕೊಳಗಳು) ಇದ್ದು, 8 ಪ್ರಮುಖ ದೊಣೆಗಳಾದ ಆನೆ ಕಾಲಿನ ದೊಣೆ, ಉಪ್ಪು ದೊಣೆ, ಆಂಜನೇಯ ದೊಣೆ, ಜೇನುತುಪ್ಪದ ದೊಣೆ, ನೇರಳೆ ಮರದ ದೊಣೆ, ಸೀತಾ ದೊಣೆ, ಲಕ್ಷ್ಮಣನ ದೊಣೆ ಮತ್ತು ರಾಮರ ದೊಣೆ ಸೇರಿವೆ. ಎಲ್ಲದಕ್ಕಿಂತ ರಾಮರ ದೊಣೆ ಎತ್ತರವಾಗಿ ದೊಡ್ಡದಾಗಿದ್ದು ಸದಾಕಾಲ ಶುದ್ಧನೀರಿನಿಂದ ತುಂಬಿರುತ್ತದೆ. ಈ ಜಲವು ಹಲವು ರೋಗಗಳ ಉಪಶಮನಕ್ಕೆ ಸಹಕಾರಿಯಾಗಿದೆ ಎಂಬುದು ನಂಬಿಕೆ.


ಬೆಟ್ಟದ ಶಿಖರ ಭಾಗದಲ್ಲಿ ಎರಡು ದೇವಸ್ಥಾನಗಳಿದ್ದು, ಒಂದರಲ್ಲಿ ಶಿವಲಿಂಗವನ್ನು, ಮತ್ತೊಂದರಲ್ಲಿ ಪಾರ್ವತಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಸ್ಥಳ ಪುರಾಣದ ರೀತ್ಯ ಇದು ದಂಡಕಾರಣ್ಯದ ಪ್ರದೇಶವಾಗಿದ್ದು ಇಲ್ಲಿ ಸೀತಾ ರಾಮ ಲಕ್ಷ್ಮಣರು ಸಂಚರಿಸಿದ್ದರಂತೆ. ರಾವಣನನ್ನು ವಧಿಸಿದ ನಂತರ ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ ಶ್ರೀರಾಮನು 108 ಲಿಂಗಗಳನ್ನು ಪ್ರತಿಷ್ಠಾಪಿಸಿದ್ದು ಅದರಲ್ಲಿ ಒಂದನ್ನು ಸುರಸದ್ಮಗಿರಿಯಲ್ಲಿ ಪ್ರತಿಷ್ಠಾಪಿಸಿದನೆಂದು, ಹಾಗಾಗಿ ಈ ಅಪರೂಪದ ಜ್ಯೋತಿರ್ಲಿಂಗಕ್ಕೆ ರಾಮೇಶ್ವರ ಎಂಬ ಹೆಸರು ಬಂತೆಂದು ಹೇಳಲಾಗಿದೆ.



ಇತಿಹಾಸದ ಪ್ರಕಾರ ಸುಮಾರು 400 ವರ್ಷಗಳ ಹಿಂದೆ ಬಳ್ಳಾರಿ ಪ್ರಾಂತ್ಯದ ಹಳ್ಳಿಯ ಪಾಳೇಗಾರರ ಮನೆತನದಲ್ಲಿ ಊರು ಬಿಡುವ ಪರಿಸ್ಥಿತಿ ಬಂದೊದಗಿ, ಭೈರೇಗೌಡ ಎಂಬುವನು ತನ್ನ ಭಾಗಕ್ಕೆ ಬಂದ ಸಂಪತ್ತನ್ನು ಏಳು ಬಂಡಿಗಳಿಗೆ ತುಂಬಿಸಿ ಪರಿವಾರದೊಂದಿಗೆ ಹೊರಟು ಆವತಿ ಎಂಬ ಸ್ಥಳದಲ್ಲಿ ನೆಲೆಸುತ್ತಾನೆ. ಗುಡಿಬಂಡೆ ಪ್ರದೇಶವನ್ನು ಪೆನುಗೊಂಡ ಅರಸರಿಂದ 1800 ವರಹಗಳಿಗೆ ಖರೀದಿಸಿದನೆಂದು ಕಥೆ ತಿಳಿಸುತ್ತದೆ.


ಗುಡಿಬಂಡೆಯ ಪಾಳೇಗಾರಿಕೆ ಪಡೆದ ಭೈರೇಗೌಡ ಶತ್ರುಗಳಿಂದ ರಕ್ಷಣೆ ಪಡೆಯಲು ಊರಿನ ಸುತ್ತಲೂ ಭದ್ರವಾದ ಕಂದಕಗಳನ್ನು ನಿರ್ಮಿಸಿ ಸುರಸದ್ಮಗಿರಿಯ ಮೇಲೆ ಏಳು ಸುತ್ತಿನ ಕೋಟೆ ನಿರ್ಮಿಸಿದ್ದಾನೆ. ಬೈರೇಗೌಡನ ನಿರ್ದಿಷ್ಟವಾದ ಕಾಲವನ್ನು ಸ್ಪಷ್ಟಪಡಿಸಲು #ಶಿಲಾ #ಶಾಸನಗಳು, ಆಧಾರಗಳು ಬೆಟ್ಟದಲ್ಲಿ ಈವರೆಗೂ ಪತ್ತೆಯಾಗಿಲ್ಲ. ಶತ್ರುಗಳ ಬರುವಿಕೆಯನ್ನು ಗಮನಿಸಲು ರಂದ್ರಗಳನ್ನು ಕೊರೆಯಲಾಗಿದೆ. ಆರನೆಯ ಸುತ್ತಿನ ಕೋಟೆಯಲ್ಲಿ ಶತ್ರುಗಳನ್ನು ಕೂಡಿಹಾಕಲು ನೆಲಮನೆ ಮತ್ತು ಪಾಳೇಗಾರನ ಆಸ್ಥಾನ ನರ್ತಕಿಯದೆಂದು ಹೇಳಲಾಗುವ ಗೃಹವನ್ನು ನಿರ್ಮಿಸಲಾಗಿದೆ (ಈಗ ಅವುಗಳ ಅವಶೇಷಗಳು ಉಳಿದಿವೆ). ಈ ಬೆಟ್ಟದಲ್ಲಿ ಮೈಸೂರು ಅರಸರಿಗೆ ಸಂಬಂಧಿಸಿದ 'ಗಂಡಭೇರುಂಡ' ಲಾಂಛನದ ಚಿತ್ರ ಒಂದೆಡೆ ಕಂಡುಬರುತ್ತದೆ. ನೀರಾವರಿ ವ್ಯವಸ್ಥೆಗಾಗಿ ಇವರ ಕಾಲದಲ್ಲಿ ಬೆಟ್ಟದ ಮೇಲೆ ಹಲವು ಕೊಳಗಳನ್ನು ಅಲ್ಲದೆ, ಊರಿನಲ್ಲಿ ಹಲವು ಬಾವಿಗಳನ್ನು ಉತ್ತಮ ಕಟ್ಟಡದೊಂದಿಗೆ ನಿರ್ಮಿಸಲಾಗಿದೆ.


ಒಂದೆಡೆ ಈತನನ್ನು ಹಾವಳಿ ಭೈರೇಗೌಡ ಎಂದೇ ಪ್ರಸ್ತಾಪಿಸಲಾಗುತ್ತದೆ. ಕೂರ್ಮಗಿರಿ ಪುರಾಣದ ಪ್ರಕಾರ ಈತ ದಂಡಯಾತ್ರೆಗೆ ಮೊದಲು ಎಲ್ಲೋಡು ಆದಿನಾರಾಯಣಸ್ವಾಮಿ ಸನ್ನಿಧಿಯಲ್ಲಿ ನೆಲೆಸಿದ್ದ ಶ್ರೀ ಕೃಷ್ಣಾನಂದ ಎಂಬ ಅವಧೂತರ ಆಶೀರ್ವಾದ ಪಡೆದು, ಅವರಿಗೆ ಕೊಟ್ಟ ಮಾತಿನ ಪ್ರಕಾರ ದಿಗ್ವಿಜಯ ಸಾಧಿಸಿ ಬಂದ ನಂತರ ಕುದುರೆ ಹರಿದಾಡಿದಷ್ಟು ಸ್ಥಳವನ್ನು ಎಲ್ಲೋಡು ಆದಿನಾರಾಯಣಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ದಾನಮಾಡಿನೆಂದು ತಿಳಿದುಬರುತ್ತದೆ. ಭೈರೇಗೌಡ ತಾನು ಸಂಪಾದಿಸಿದ ಆಸ್ತಿಯನ್ನು ತನ್ನ ಕೋಟೆಯಲ್ಲಿ ಅಡಗಿಸಿದ್ದ ಎಂದು ಹೇಳಲಾಗುತ್ತದೆ. ಇದನ್ನು ಪುಷ್ಟೀಕರಿಸುವಂತೆ ಕೋಟೆ ಕೊತ್ತಲಗಳನ್ನು ಹೊಂದಿರುವ ಈ ಬೆಟ್ಟದ ಒಂದು ಭಾಗದಲ್ಲಿ ಒಬ್ಬ ಮನುಷ್ಯನ ಮುಂಡವನ್ನು ಮಾತ್ರ ಚಿತ್ರಿಸಲಾಗಿದ್ದು, ಅದರ ರುಂಡವನ್ನು ಸಂಪಾದಿಸಿ ಜೋಡಿಸಿದವರಿಗೆ ಏಳು ಉಪ್ಪರಿಗೆ ಹೊನ್ನು ದೊರೆಯುತ್ತದೆ ಎಂಬ ದಂತಕಥೆ ಇದೆ. ಈ ಮಾತುಗಳನ್ನು ಅನುಕರಿಸಿ ನಿಧಿಶೋಧಕರು ಕೋಟೆಕೊತ್ತಲಗಳ ಹಲವು ಭಾಗಗಳನ್ನು ಹಾಳುಗೆಡವಿದ್ದಾರೆ.


ಗತವೈಭವ ಮರುಳಿತೇ


ಇಷ್ಟೊಂದು ಇತಿಹಾಸ ಹೊಂದಿದ್ದರೂ ಮಲತಾಯಿ ಧೋರಣೆಯಿಂದ ಇಂದಿಗೂ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ ಹಾಗೂ ರಾಜ್ಯದ ಹಿಂದುಳಿದ ತಾಲ್ಲೂಕು ಎಂಬ ಹೆಣೆಪಟ್ಟಿಯನ್ನು ಕಟ್ಟಿಕೊಂಡಿದೆ. ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಇದರ ಬಗ್ಗೆ ಕಾಳಜಿ ವಹಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಮಾಡಬೇಕೆಂಬುದು ಇಲ್ಲಿಯ ಪಟ್ಟಣ ವಾಸಿಗಳ ಅಭಿಪ್ರಾಯ.


ಕೃಪೆ:- -ಸ. ನ.ನಾಗೇಂದ್ರ, ಫಣೀಶ್ ಶೆಟ್ಟಿ, ದಿನೇಶ್ ಚೌಧರಿ

41 views0 comments

Comentários


bottom of page