"ಈಗಿನ ಯಲಹಂಕದ ಕೊಡಿಗೆಹಳ್ಳಿ ಸಮೀಪ ಒಂದು ಸಣ್ಣ ಹಳ್ಳಿ ಇತ್ತು. ಅಲ್ಲಿಗೆ ಹೊಯ್ಸಳ ದೊರೆ ಬಲ್ಲಾಳ ಎಂಬಾತ ಬೇಟೆಗಾಗಿ ಆಗಮಿಸುತ್ತಾನೆ. ದಾರಿ ತಪ್ಪಿ ಸೈನಿಕರೆಲ್ಲಾ ಬೇರೆ ಬೇರೆಯಾಗುತ್ತಾರೆ. ಬಲ್ಲಾಳ ಏಕಾಂಗಿಯಾಗುತ್ತಾನೆ. ಹಸಿವು ಮತ್ತು ದಾಹವನ್ನು ತಾಳಲಾರದೆ ಕಣ್ಣಿಗೆ ಬಿದ್ದ ಗುಡಿಸಲಿಗೆ ಹೋಗಿ ತಿನ್ನಲು ಏನನ್ನಾದರೂ ಕೊಡಿ ಎಂದು ಕೇಳುತ್ತಾನೆ. ಆಗ ಗುಡಿಸಲಲ್ಲಿದ್ದ ಮುದುಕಿ ಒಂದಷ್ಟು ಬೆಂದ ಕಾಳು ಮತ್ತು ನೀರನ್ನು ನೀಡುತ್ತಾಳೆ. ಹಸಿವು ನೀಗಿಸಿಕೊಂಡ ರಾಜ ಬಲ್ಲಾಳ ಮುದುಕಿಗೆ ಬಹುಮಾನ ನೀಡಿ ಆ ಗುಡಿಸಲಿದ್ದ ಪ್ರದೇಶಕ್ಕೆ ಬೆಂದಕಾಳೂರು (ಬೆಂದಕಾಳು+ಊರು) ಎಂದು ಹೆಸರಿಟ್ಟನಂತೆ. ಮುಂದೆ ಇದೇ ಬೆಂಗಳೂರು ಎಂದು ಹೆಸರಾಗಿದೆ."
ಎಂಬ 14 ನೇ ಶತಮಾನದ ಕತೆ ಹೆಚ್ಚು ಜನಜನಿತವಾಗಿದ್ದರೂ, ಈ ಕತೆಗೆ ಯಾವುದೇ ಪುರಾವೆ ಇಲ್ಲ ಎಂದು ಇತಿಹಾಸ ತಜ್ಞರು ವಾದಿಸುತ್ತಾರೆ.
‘...ಬೆಂಗುಳೂರ ಕಾಳೆಗದೊಳ್ ನಾಗತರನ ಮಗಂ ಬುಟ್ಟಣಪತಿ ಸತ್ತಂ ...’ ಎಂಬ ಲಿಪಿ ಇರುವ ಕ್ರಿಸ್ತಶಕ 890ರ ವೀರಗಲ್ಲು 'ಬೆಂಗಳೂರು' ಮೇಲಿನ ಕಥೆಯ ಕಾಲಘಟ್ಟಕ್ಕಿಂತ ಪುರಾತನವಾದದ್ದು ಹಾಗೂ ಸುಮಾರು 1100 ವರ್ಷದ ಇತಿಹಾಸ ಹೊಂದಿದೆ ಎಂದು ಸಾರುತ್ತದೆ.
ಎಡ : ಮೂಲ ಶಾಸನ, ಬಲ: ಮಿಥಿಕ್ ಸೊಸೈಟಿಯಲ್ಲಿನ ಪ್ರತಿಕೃತಿ
ಇಂತಹ ಐತಿಹಾಸಿಕ ದಾಖಲೆಯ ವೀರಗಲ್ಲು ದೊರೆತದ್ದೇ ಬೆಂಗಳೂರಿನ ಬೇಗೂರಿನ ಶ್ರೀ ಪಂಚಲಿಂಗ ನಾಗೇಶ್ವರ ದೇವಾಲಯದ ಆವರಣದಲ್ಲಿ.
ಗಂಗರ ಅಧಿಪತ್ಯ
ಗಂಗರ ಏರೆಯಪ್ಪನಿಗೂ ನೊಳಂಬರ ವೀರ ಮಹೇಂದ್ರನಿಗೂ ಕಾಳಗವಾಯಿತು. ಇದರಲ್ಲಿ ನಾಗತ್ತರ ಎಂಬ ಜೈನಮತ ಅನುಯಾಯಿಯು ಗಂಗರ ಸೇನಾ ಮುಖ್ಯಸ್ಥನಾಗಿದ್ದು, ಮಹೇಂದ್ರನ ಮಗ ಅಯ್ಯಪ್ಪನ ಗಜಪಡೆಗೆ ಸಿಕ್ಕಿ ಸತ್ತನು. ಗಂಗರು ಅಂತಿಮವಾಗಿ ಯುದ್ಧದಲ್ಲಿ ಗೆದ್ದ ನಂತರ ನಾಗತ್ತರ ವಂಶಕ್ಕೆ ವೆಪ್ಪುರೂ ಅಥವಾ ಬೆಂವೂರು ಸೇರಿದಂತೆ 12 ಗ್ರಾಮಗಳ ಉಂಬಳಿಯನ್ನು ಕೊಡುಗೆ ಇತ್ತರು. ಗಂಗರು ಶೈವ ಹಾಗೂ ಜೈನ ಮತಗಳ ಆಶ್ರಯದಾತರಾಗಿದ್ದರು. ಬೆಂವೂರುನಲ್ಲಿ ಶ್ರವಣಪ್ಪನಿಗಾಗಿ ಚೊಕ್ಕಮಯ್ಯ ಎಂಬ ಜಿನಾಲಯವನ್ನು ಹಾಗೂ ಹಲವು ಶಿವಾಲಯಗಳನ್ನು ಕಟ್ಟಿಸಿದರು. ಈ ರೀತಿ ವೈದಿಕ, ಸಾಂಸ್ಕೃತಿಕ ಹಾಗೂ ವಾಣಿಜ್ಯ ಕೇಂದ್ರವಾಗಿದ್ದ ವೆಪ್ಪುರೂ ಅಥವಾ ಬೆಂವೂರೇ ಇಂದಿನ ಬೇಗೂರು.
ಗಂಗರ ಏರೆಯಪ್ಪ ನೀತಿಮಾರ್ಗ I ಹಾಗೂ II ಎಂಬ ರಾಜರು, 8 ಮತ್ತು 9ನೇ ಶತಮಾನದ ಕಾಲದಲ್ಲಿ ಬೇಗೂರಿನಲ್ಲಿ ಶ್ರೀ ನಗರೇಶ್ವರ ಸ್ವಾಮಿ ಮತ್ತು ಶ್ರೀ ನಾಗೇಶ್ವರ ಸ್ವಾಮಿ ಎಂಬ ಎರಡು ಶಿವಾಲಯಗಳನ್ನು ಕಟ್ಟಿಸಿದರು. ನಂತರ ಬಂದ ಚೋಳರು 11ನೇ ಶತಮಾನದಲ್ಲಿ ಶ್ರೀ ಚೋಳೇಶ್ವರ ಸ್ವಾಮಿ, ಶ್ರೀ ಕಾಳಿಕಮಠೇಶ್ವರಿ ಸ್ವಾಮಿ ಮತ್ತು ಶ್ರೀ ಕರ್ಣೇಶ್ವರ ಸ್ವಾಮಿ ಎಂಬ ಹೆಸರಿನ 3 ದೇಗುಲಗಳನ್ನು ನಿರ್ಮಿಸಿದರು. ಈ ಐದು ಶಿವಾಲಯಗಳನ್ನು ಒಳಗೊಂಡ ಗಂಗ-ಚೋಳರ ಕಾಲದ ದೇವಾಲಯ ಸಂಕೀರ್ಣವೇ ಬೇಗೂರಿನ ಶ್ರೀ ಪಂಚಲಿಂಗ ನಾಗೇಶ್ವರ ಸ್ವಾಮಿ ದೇವಾಲಯ.
ಬೇಗೂರಿನ ಶ್ರೀ ಪಂಚಲಿಂಗ ನಾಗೇಶ್ವರ ಸ್ವಾಮಿ ದೇವಾಲಯ ಸಂಕೀರ್ಣ
ಪಂಚಲಿಂಗ ದೇವಾಲಯದ ಶಿಲಾಪ್ರೌಢಿಮೆ
ಶ್ರೀ ನಾಗೇಶ್ವರ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ತೆರೆದ ಅಗ್ರ ಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ಈಶ್ವರನ ರೂಪವಾಗಿ 3.5 ಅಡಿ ಪೂರ್ವಾಭಿಮುಖವಾದ ಲಿಂಗವಿದೆ. ಅಂತರಾಳದಲ್ಲಿ ಹಾಗೂ ನವರಂಗದಲ್ಲಿ 2 ಮತ್ತು 4 ಕಂಬಗಳಿವೆ. ಅಗ್ರಮಂಟಪವು 8 ಕಂಬಗಳನ್ನು ಹೊಂದಿದ್ದು ನಂದಿಯ ವಿಗ್ರಹವು ಸ್ಥಾಪಿತವಾಗಿದೆ. ನವರಂಗದಲ್ಲಿ ಉಮಾಮಹೇಶ್ವರ, ಸಪ್ತಮಾತೃಕೆ, ಭೈರವ, ಮಹಿಷಮರ್ದಿನಿ ಹಾಗೂ ಸೂರ್ಯನ ಶಿಲ್ಪಗಳಿವೆ. ಈ ದೇವಾಲಯಕ್ಕೆ ವೃತ್ತಾಕಾರದ ಶಿಖರವಿದೆ.
ನಾಗೇಶ್ವರ ಸ್ವಾಮಿಯ ಪತ್ನಿಯಾದ ಪಾರ್ವತಿ ದೇವಿಯ ಐದು ಅಡಿ ವಿಗ್ರಹವನ್ನು ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿದೆ. ಇದನ್ನು ದಕ್ಷಿಣ ಕಾಳಿ ಎಂದೂ ಕರೆಯುತ್ತಾರೆ. ಚೋಳರ ಶೈಲಿಯಲ್ಲಿ ನಿರ್ಮಿಸಿರುವ ಬಲಗೈಯಲ್ಲಿ ಲಿಂಗವನ್ನು ಹಿಡಿದಿರುವ ಗಣಪತಿ ವಿಗ್ರಹ, ಸರ್ಪದ ಆಕಾರದ ಸುಬ್ರಹ್ಮಣ್ಯ ಹಾಗೂ ಸೂರ್ಯರ ವಿಗ್ರಹಗಳು ಪಾರ್ವತಿಯ ದೇಗುಲದ ದ್ವಾರದಲ್ಲಿದೆ.
ಶ್ರೀ ಚೋಳೇಶ್ವರ ಮತ್ತು ಶ್ರೀ ನಾಗೇಶ್ವರ ದೇವಾಲಯದ ಹಿಂಬಾಗ
ಶ್ರೀ ಚೋಳೇಶ್ವರ ದೇವಾಲಯವು ನಾಗೇಶ್ವರ ದೇವಾಲಯದ ಎಡಭಾಗದಲ್ಲಿದ್ದು ಅದನ್ನೇ ಹೋಲುತ್ತದೆ. ಗರ್ಭಗುಡಿಯಲ್ಲಿ ಸುಮಾರು 4 ಅಡಿ ಎತ್ತರದ ಬೃಹತ್ ಶಿವಲಿಂಗವಿದ್ದು, ಅಂತರಾಳ ಮತ್ತು ನವರಂಗದಲ್ಲಿ ಬೇರೆ ಯಾವುದೇ ವಿಗ್ರಹಗಳು ಇಲ್ಲ. ಮುಂದೆ ಸುಮಾರು 2 ಅಡಿ ಎತ್ತರದ ನಂದಿ ವಿಗ್ರಹವಿದೆ. ಈ ದೇಗುಲದ ಶಿಖರವು ಚೌಕಾಕಾರವಾಗಿದ್ದು, ದ್ವಿತಳ ಮಾದರಿಯ ವಿಮಾನವನ್ನು ಹೊಂದಿದೆ.
ಶ್ರೀ ನಾಗೇಶ್ವರ ಮತ್ತು ಶ್ರೀ ಚೋಳೇಶ್ವರ ದೇವಾಲಯದ ಹೊರಭಾಗ, ವಿಮಾನ ಹಾಗೂ ಶಿಖರಗಳು ಇನ್ನೂ ಅಂದಿನ ಪುರಾತನ ಶೈಲಿಯಲ್ಲಿಯೇ ಇದ್ದು, ಗತಿಸಿದ ಕಾಲದ ವಿಶೇಷಗಳನ್ನು ಹೇಳುತ್ತಾ ಆಗಿನ ವಾಸ್ತುಶಿಲ್ಪ ಜ್ಞಾನಕ್ಕೆ ಸಾಕ್ಷಿಯಾಗಿ ನೋಡುಗರನ್ನು ಸೆಳೆಯುತ್ತಿವೆ.
ಶ್ರೀ ನಾಗೇಶ್ವರ ಮತ್ತು ಶ್ರೀ ಚೋಳೇಶ್ವರ ದೇವಾಲಯದ ಹೊರಭಾಗ, ವಿಮಾನ ಹಾಗೂ ಶಿಖರ
ಶ್ರೀ ಕಾಳಿಕಮಠೇಶ್ವರಿ ದೇವಾಲಯದಲ್ಲಿ ಸುಮಾರು 3.5 ಅಡಿ ಎತ್ತರದ ದೇವಿ ವಿಗ್ರಹವಿದ್ದು, ಅದರ ತಳದಲ್ಲಿ ಲಿಂಗವಿದೆ. ಕಾಳಿ ದೇವಿಯನ್ನು ನೇರವಾಗಿ ನೋಡುವುದು ಶ್ರೇಯಸ್ಸಲ್ಲ ಎಂಬ ಕಾರಣಕ್ಕೆ ನಂದಿಯ ವಿಗ್ರಹವನ್ನು ದ್ವಾರದಲ್ಲಿ ಸ್ವಲ್ಪ ಬಲಬದಿಗೆ ಸ್ಥಾಪಿಸಲಾಗಿದೆ.
ಶ್ರೀ ನಗರೇಶ್ವರ ದೇವಾಲಯವು ನಾಗೇಶ್ವರ ದೇವಾಲಯದ ಬಲಭಾಗದಲ್ಲಿ ಪ್ರತ್ಯೇಕವಾಗಿದೆ. ಚೌಕಾಕಾರದ ಗರ್ಭಗೃಹದಲ್ಲಿ ಲಿಂಗ, ಅಂತರಾಳ ಮತ್ತು ನವರಂಗ ಇದೆ. ಹೊರಗೆ ಅಗ್ರ ಮಂಟಪ ಇದ್ದು ಉತ್ತರ-ದಕ್ಷಿಣ ಅಭಿಮುಖವಾಗಿ ಮೂಲೆಯಲ್ಲಿ ಮೆಟ್ಟಲುಗಳಿವೆ. ಮಂಟಪದಲ್ಲಿ ಅಸಮಾನಾಂತರದಲ್ಲಿರುವ 6 ಕಂಬಗಳಿದ್ದು, ಕಮಲದ ಮೇಲೆ ಸ್ಥಾಪಿತವಾಗಿರುವ 4 ಅಡಿ ಎತ್ತರದ ನಂದಿಯಿದೆ. ಕಲ್ಲಿನ ಕಂಬಗಳು ಸರಳವಾಗಿದ್ದು, ಚೌಕಾಕಾರದ ಅಡಿಪಾಯ, ಸಾದಾ ಕೆಳಭಾಗ ಮತ್ತು ಅಷ್ಟಕೋನಾಕಾರದ ಮೇಲ್ಭಾಗವನ್ನು ಹೊಂದಿದೆ. ನವರಂಗವು ಗಂಗರ ಕಲಾನೈಪುಣ್ಯ ಸಾಕ್ಷಿಯಾಗಿದ್ದು 8 ಚೌಕಾಕಾರದ ಫಲಕಗಳಿಂದ ಕೂಡಿದ್ದು ಅಷ್ಟದಿಕ್ಪಾಲಕರು ಮತ್ತು ಚತುರ್ಭುಜ ಉಮಾಮಹೇಶ್ವರ ಕೆತ್ತನೆಯನ್ನು ಹೊಂದಿದೆ. ಅಗ್ರ ಮಂಟಪದ ಮೇಲ್ಛಾವಣಿಯಲ್ಲಿ ಶಿವಪಾರ್ವತಿ ಕುಳಿತಿರುವ ಭಂಗಿಯ ಕೆತ್ತನೆಯಿದೆ. ಇದಲ್ಲದೆ ಮಹಿಷಾಸುರಮರ್ದಿನಿ, ದ್ವಿಭುಜ ಗಣಪತಿ ಮತ್ತು ಕಾಲಭೈರವನ ವಿಗ್ರಹಗಳು ಮನೋಹರವಾಗಿದೆ. ದ್ವಾರದ ಕಂಬಗಳು ಬಳ್ಳಿ, ಶಿವಗಣ, ಕಮಲದಿಂದ ಅಲಂಕೃತವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕೆತ್ತಲಾಗಿದೆ. ಈ ದೇಗುಲವು ನವೀಕರಣಗೊಳ್ಳುತಿದ್ದು, ಶಿಖರದ ಭಾಗ, ಹೊರಗಿನ ಗೋಡೆ ಮತ್ತು ಅಗ್ರ ಮಂಟಪಗಳ ಕೆಲಸ ನಡೆಯುತ್ತಿದೆ.
ಶ್ರೀ ನಗರೇಶ್ವರ ದೇವಾಲಯ
ನಗರೇಶ್ವರ ದೇವಾಲಯದ ಎದುರು ಪಶ್ಚಿಮಕ್ಕೆ ಮುಖ ಮಾಡಿರುವ ಸೂರ್ಯನ ದೇವಾಲಯ ಅಚ್ಚರಿ ಮೂಡಿಸುತ್ತದೆ.
ಗಣಪತಿ, ಸೂರ್ಯ, ಚಂಡಿಕೇಶ್ವರ ಮತ್ತು ಶ್ರೀ ಕರ್ಣೇಶ್ವರ ಸ್ವಾಮಿಯ ಗುಡಿ
ಶ್ರೀ ಕರ್ಣೇಶ್ವರ ಸ್ವಾಮಿಯ ಗುಡಿಯಲ್ಲಿರುವ ಲಿಂಗವೇ ಎಲ್ಲಕ್ಕಿಂತ ಚಿಕ್ಕದಾಗಿದ್ದು ಸುಮಾರು 2.5 ಅಡಿ ಇದೆ. ಮುಂದೆ ಚಿಕ್ಕದಾದ ನಂದಿ ಇದ್ದು, ನವರಂಗ ಹಾಗೂ ಮಂಟಪಗಳು ಸರಳವಾಗಿವೆ.
ವಿಸ್ತಾರವಾದ ಬೇಗೂರಿನ ಕೆರೆಯ ದಡದಲ್ಲಿರುವ ಈ ದೇವಾಲಯದ ಸಂಕೀರ್ಣಕ್ಕೆ ಈಗ ಎತ್ತರವಾದ ಕಾಂಪೌಂಡ್ ಹಾಗೂ ಎದ್ದುಕಾಣುವ ವರ್ಣರಂಜಿತ ಸಿಮೆಂಟ್ ಕಾಂಕ್ರೀಟ್ ನ ರಾಜಗೋಪುರಗಳನ್ನು ನಾಲ್ಕು ದಿಕ್ಕಿನಲ್ಲಿ ಕಟ್ಟಲಾಗಿದೆ. ಸಂಪೂರ್ಣವಾಗಿ ಆಧುನಿಕ ನಿರ್ಮಾಣವಾದ ಈ ರಾಜಗೋಪುರಗಳು ಪ್ರಾಚೀನ ದೇವಾಲಯದ ಸಂಕೀರ್ಣಕ್ಕೆ ವ್ಯತಿರಿಕ್ತವಾಗಿದ್ದು ಕಾಲದ ಕೊಂಡಿಯಂತಿದೆ.
ಚೈತ್ರಮಾಸದಲ್ಲಿ ನಡೆಯುವ ಧ್ವಜಾರೋಹಣಿ, ರಥೋತ್ಸವಕ್ಕೆ ಸುಮಾರು 10 ಉತ್ಸವ ಮೂರ್ತಿಗಳು ಸುತ್ತಲಿನ ದೇವಾಲಯಗಳಿಂದ ಪಲ್ಲಕ್ಕಿಯಲ್ಲಿ ಬಂದು ಸೇರುತ್ತವೆ. ಕಲ್ಯಾಣೋತ್ಸವ ಮತ್ತು ಶಯನೋತ್ಸವ ಇಲ್ಲಿಯ ವಿಶೇಷ ಸೇವೆಯಾಗಿದ್ದು ಆಸ್ತಿಕರನ್ನು ಮುದಗೊಳಿಸುತ್ತದೆ.
ಪ್ರಾಚ್ಯವಸ್ತು ಸಂರಕ್ಷಣೆ
ಇದೇ ಶ್ರೀ ಪಂಚಲಿಂಗ ನಾಗೇಶ್ವರ ದೇವಾಲಯದ ಸಂಕೀರ್ಣದಲ್ಲಿ 'ಬೆಂಗುಳೂರ' ಎಂಬ ಪದವನ್ನು ಉಪಯೋಗಿಸಿರುವ ಕ್ರಿಸ್ತಶಕ 890ರ ವೀರಗಲ್ಲು ದೊರೆತಿದ್ದು, ಈಗಲೂ ಅದನ್ನು ದೇವಾಲಯದ ಎಡಬದಿಯಲ್ಲಿ ವೇದಿಕೆ ನಿರ್ಮಿಸಿ ಫಲಕದೊಡನೆ ಸಂರಕ್ಷಿಸಲಾಗಿದೆ. ಜೊತೆಗೆ ಇಲ್ಲಿ ಹಲವಾರು ವೀರಶಾಸನಗಳು, ಕೆತ್ತನೆಯುಳ್ಳ ಶಿಲಾವಿಗ್ರಹಗಳನ್ನು ಸಂಯೋಜಿಸಲಾಗಿದೆ.
ಬೆಂದಕಾಳೂರು ಅಲ್ಲಾ ಇದು ಬೆಂಗಳೂರು ಎಂದು ವಿಷದಪಡಿಸುತ್ತಾ, ಇತಿಹಾಸ ಹಾಗೂ ವಾಸ್ತುಶಿಲ್ಪದ ಸೂಕ್ಷ್ಮಗಳನ್ನು ಅನಾವರಣಗೊಳಿಸುತ್ತಾ, ಶ್ರೀ ಪಾರ್ವತಿ ಸಮೇತ ಪಂಚಲಿಂಗ ನಾಗೇಶ್ವರ ದೇವಾಲಯವು ಆಧ್ಯಾತ್ಮಿಕತೆಯೊಂದಿಗೆ ಆಸಕ್ತರನ್ನು ತನ್ನತ್ತ ಸೆಳೆಯುತ್ತಿದೆ.
Thank you for the history of Bengaluru with blend of narration and photos. Your article kindled a desire to visit Begur temple complex.