top of page
HCM

ಬಸವನ ಪಕ್ಕದ ಗುಡಿಯ ದೊಡ್ಡ ಗಣಪತಿ

Updated: Aug 24, 2023



ಗಣೇಶ ಬಂದ

ಕಾಯಿ ಕಡುಬು ತಿಂದ

ಹೊಟ್ಟೆ ಮೇಲೆ ಗಂಧ

ಚಿಕ್ಕ ಕೆರೆಲಿ ಬಿದ್ದ

ದೊಡ್ಡ ಕೆರೆಲಿ ಎದ್ದ ...


... ಈ ಆವರ್ತನ ಕ್ರಿಯೆಗೆ ಒಗ್ಗದೆ, ಧರೆಯ ಗರ್ಭದಿಂದ ಆವಿರ್ಭವಿಸಿದ ಬೃಹತ್ ಬಂಡೆಯಲ್ಲಿ ಸದಾ ದರ್ಶನ ನೀಡುತ್ತಿರುವವನೇ ಬಸವನಗುಡಿಯ ದೊಡ್ಡ ಗಣಪತಿ.


ಐದು ಶತಕಗಳ ಇತಿಹಾಸ


ಗಂಗರು, ನೊಳಂಬರು, ಚೋಳರು, ಹೊಯ್ಸಳರು ಮುಂತಾದವರ ಆಳ್ವಿಕೆಯ ತರುವಾಯ 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ನಾಡಪ್ರಭು ಕೆಂಪೇಗೌಡರು ಸುಸಜ್ಜಿತವಾದ ನಗರವೊಂದನ್ನು ತಮ್ಮ ರಾಜ್ಯದಲ್ಲಿ ನಿರ್ಮಿಸ ಬೇಕು ಎಂದು ಕನಸನ್ನು ಕಂಡರು. ಸಮತಟ್ಟಾದ, ಸಮೃದ್ಧವಾದ ಭೂಪ್ರದೇಶದಲ್ಲಿ ನಾಲ್ಕು ಬಾಗಿಲು ಮತ್ತು ಏಳು ಗೋಪುರಗಳಿಂದ ಕೂಡಿದ ಮಣ್ಣಿನ ಕೋಟೆಯನ್ನು ಕಟ್ಟಿ ಈ ಬೆಂಗಳೂರನ್ನು ಮರು ನಿರ್ಮಿಸಿದರು. ಇದಕ್ಕೂ ಮೊದಲು ಬೆಂಗಳೂರು ಇತ್ತೆಂಬುದು ಗಮನಾರ್ಹವಾದ ವಿಷಯ. ಈ ಕೋಟೆಯ ದಕ್ಷಿಣ ಗಡಿಯ ಭಾಗದಲ್ಲಿ ಇದ್ದ ಗ್ರಾಮವೇ ಸುಂಕೇನಹಳ್ಳಿ. ಇಲ್ಲಿಯ ನೈಸರ್ಗಿಕವಾದ, ಸುಮಾರು 3,000 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾದ ಏಕ ಶಿಲೆಯ ಮೇಲೆ ಕಾವಲು ಗೋಪುರವನ್ನು ಸ್ಥಾಪಿಸಿ ಅದಕ್ಕೆ ಕಹಳೆ ಬಂಡೆ (ಬ್ಯೂಗಲ್‌ ರಾಕ್) ಎಂದು ಹೆಸರಿದರು. ಇಲ್ಲಿಂದಲೇ ಕೆಂಗೇರಿ, ಶ್ರೀರಂಗಪಟ್ಟಣ ಮತ್ತು ಮೈಸೂರಿಗೆ ಹೋಗಲು ಹಾದಿ ಇತ್ತು.

ಇದೇ ಸುಂಕೇನಹಳ್ಳಿ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ಶ್ರೀಮಂತವಾಗಿ ಬೆಳೆದು ಇಂದಿನ ಬಸವನಗುಡಿ ಆಗಿದೆ.


ಏಕಶಿಲಾ ಮೂರ್ತರೂಪ


ಸ್ಥಳ ಐತಿಹ್ಯದ ಪ್ರಕಾರ, ಸುಮಾರು ಕ್ರಿಸ್ತಶಕ 1536ರಲ್ಲಿ ಕೆಂಪೇಗೌಡರು ಇಲ್ಲಿದ್ದ ಬೃಹತ್ ಬಂಡೆಯೊಂದರಲ್ಲಿ ಗಣಪತಿಯ ರೂಪ ಇದ್ದುದನ್ನು ಗಮನಿಸಿ, ನಂತರ ಕಲಾಶಿಲ್ಪಿಗಳನ್ನು ಕರೆಸಿ ಈಗಿರುವ ವಿಘ್ನೇಶ್ವರನ ಮೂರ್ತರೂಪವನ್ನು ನೀಡಿದರು. ಬೃಹತ್ ಏಕಶಿಲಾ ವಿಗ್ರಹವಾಗಿ, ಸುಮಾರು 11 ಅಡಿ ಉದ್ದ ಮತ್ತು18 ಅಡಿ ಅಗಲದಲ್ಲಿ, ಮೂಡಿರುವ ಗಜಮುಖನಾದ ಗಣಪತಿಗೆ ಅಗಲವಾಗಿ ಹರಡಿರುವ ಕಿವಿಗಳು, ಚಿಕ್ಕದಾದ ಕಣ್ಣುಗಳಿದ್ದು ಸೊಂಡಿಲು ಎಡಗೈಯಲ್ಲಿರುವ ಮೋದಕದ ಪಾತ್ರೆ ಚಾಚಿದೆ. ಕಟಿಕಾ ಮುದ್ರೆ, ಅಂಕುಶ ಪಾಶ, ಮುರಿದ ದಂತ ಮತ್ತು ಮೋದಕದ ಪಾತ್ರೆಯನ್ನು ಹಿಡಿದಿರುವ ಚತುರ್ಭುಜ ಗಣಪತಿಯನ್ನು ಆಸೀನ ಭಂಗಿಯಲ್ಲಿ ಕೆತ್ತಲಾಗಿದೆ. ಇದು ಉಬ್ಬು ಶಿಲ್ಪವಾದರೂ ದೇವರ ಅಂಗಾಂಗಗಳನ್ನು ಬಿಡಿಸುವಲ್ಲಿ ಪೂರ್ಣ ಬಿಂಬ ಹೊರ ಹೊಮ್ಮಿರುವಂತೆ ಕೆತ್ತಿದ್ದಾರೆ.



ಬ್ರಹ್ಮಾಂಡ ರೂಪಿಯಾಗಿ ಗರ್ಭಗುಡಿಯಲ್ಲಿ ವಿಘ್ನೇಶ್ವರನನ್ನು ಕೆಂಪೇಗೌಡರ ಕಾಲದಲ್ಲಿ ಪ್ರತಿಷ್ಠಾಪಿಸಿದ್ದರೂ,

ಕೆಲವೇ ದಶಕಗಳ ಹಿಂದಿನವರೆಗೂ ಇಲ್ಲಿ ಹೆಂಚಿನ ಛಾವಣಿಯ ಪುಟ್ಟದೊಂದು ಗುಡಿಯಲ್ಲಿ ಗಣಪ ಪೂಜೆಗೊಳ್ಳುತ್ತಿದ್ದ. 1973ರಲ್ಲಿ ಸಮಾಜ ಸೇವಕರಾದ ಎಸ್.ಎಂ. ಕೃಷ್ಣಪ್ಪನವರು ದೇವಾಲಯಕ್ಕೆ ಆವರಣ ಕಟ್ಟಿಸಿದರು. ನಂತರದ ದಿನಗಳಲ್ಲಿ ಲೋಕಸಭಾ ಸದಸ್ಯರಾಗಿದ್ದ ಟಿ.ಆರ್. ಶಾಮಣ್ಣ, ವಿ.ಎಸ್. ಕೃಷ್ಣಯ್ಯರ್ ಮೊದಲಾದವರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಸರ್ಕಾರದ ನೆರವೂ ಪಡೆದು ಈಗಿರುವ ರಾಜಗೋಪುರ ಮತ್ತು ಮಹಾದ್ವಾರ ನಿರ್ಮಾಣಕ್ಕೆ ಚಾಲನೆ ನೀಡಿದರು. 1988ರಲ್ಲಿ ಈ ಕಾರ್ಯ ಪೂರ್ಣಗೊಂಡು ಈಗಿರುವ ಸುಂದರ ದೇವಾಲಯ ರೂಪುಗೊಂಡಿತು. ಮುಜರಾಯಿ ಇಲಾಖೆ ಅಧೀನದಲ್ಲಿ ಬರುವ ಈ ದೇವಸ್ಥಾನವನ್ನು ಇತ್ತೀಚೆಗೆ ಮತ್ತಷ್ಟು ಚೆಂದಗಾಣಿಸಲಾಗಿದೆ.



ಈ ವಿನಾಯಕನು ಸತ್ಯ ಗಣಪತಿ ಹಾಗೂ ಶಕ್ತಿ ಗಣಪತಿ ಎಂಬ ಹೆಸರಿನಿಂದಲೂ ಪೂಜಿತನಾಗುತ್ತಿದ್ದಾನೆ.

ಗಣಪತಿಗೆ ತರಕಾರಿಗಳಿಂದ ಶಾಖಾಂಬರಿ ಅಲಂಕಾರ, ಹರಿಶಿನ, ಕುಂಕುಮದ ಅಲಂಕಾರ, ಫಲಪುಷ್ಪ ಅಲಂಕಾರ, ನಿಂಬೇಹಣ್ಣಿನ ಅಲಂಕಾರ, ಕಡುಬಿನ ಅಲಂಕಾರ ಹೀಗೆ ಹಲವು ಬಗೆಯ ಅಲಂಕಾರ ಮಾಡಲಾಗುತ್ತದೆ. ಆದರೆ ದೊಡ್ಡ ಗಣಪನ ಚೆಲುವು ಸುಮಾರು 75 ಕೆಜಿ ಬೆಣ್ಣೆಯನ್ನು ಲೇಪಿಸಿ, ಒಣ ಹಣ್ಣುಗಳಿಂದ ವಿನ್ಯಾಸಗೊಳಿಸಿ ಪ್ರತಿ ಬಾರಿಯೂ ಒಂದೊಂದು ನವೀನ ರೀತಿಯಲ್ಲಿ ಮಾಡುವ ಬೆಣ್ಣೆ ಅಲಂಕಾರದಲ್ಲಿ ನೂರ್ಮಡಿಗೊಳ್ಳುತ್ತದೆ. ಇದೇ ದೇವಾಲಯದ ಪಕ್ಕದಲ್ಲಿರುವ ದೊಡ್ಡ ಬಸವಣ್ಣನ ದೇವಾಲಯದ ನಿಮಿತ್ತ ಜರಗುವ ಕಡಲೆಕಾಯಿಯ ಪರಿಷೆಯ ದಿನ ಈ ಗಣಪತಿಗೆ ಕಡಲೆಕಾಯಿಯ ಅಭಿಷೇಕ ನಡೆಯುತ್ತದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಗಣಪತಿ, ಬಸವಣ್ಣ, ಬೇಡರಕಣ್ಣಪ್ಪ, ಹನುಮಂತ, ಶ್ರೀರಾಮ ಮತ್ತು ರೇಣುಕಾ ಎಲ್ಲಮ್ಮ ಮುಂತಾದ ಗುಡಿಗಳ ಸಮೂಹವೇ ಇಲ್ಲಿದೆ.


ಅದ್ಭುತ ಗಾತ್ರದಿಂದ ವಿರಾಜಿಸುವ ದೊಡ್ಡಗಣಪತಿ ಮಹಿಮೆ ಅಪಾರವಾದದ್ದು. ಪರೀಕ್ಷಾ ಸಮಯ ಬಂದರಂತೂ ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರಗಳೊಂದಿಗೆ ಗುಡಿಗೆ ಬಂದು, ದೇವರ ಪಾದದ ಬಳಿ ಇಟ್ಟು, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಮಾಡೆಂದು ಪ್ರಾರ್ಥಿಸುತ್ತಾರೆ. ಹೊಸದಾಗಿ ವಾಹನ ಕೊಂಡವರು ಇಲ್ಲಿ ಬಂದು ಪೂಜೆ ಮಾಡಿಸುವ ದೃಶ್ಯ ಸರ್ವೇಸಾಮಾನ್ಯ. ನೋಡಲು ಮನಮೋಹಕವಾಗಿರುವ ಈ ಗಣೇಶನ ದೇವಾಲಯದಲ್ಲಿ ನೂರಾರು ಚಲನಚಿತ್ರಗಳ ಚಿತ್ರೀಕರಣ ನಡೆದಿದೆ. ವಾಣಿಜ್ಯ ಚಟುವಟಿಕೆಗಳಿಂದ ಸದಾ ಗಿಜಿಗುಡುವ ಈ ಪ್ರದೇಶ ಆಸ್ತಿಕರು, ಪ್ರವಾಸಿಗರು, ಉದ್ಯಾನವನಕ್ಕೆ ಬರುವವರು, ಜಾಗಿಂಗ್ ಮಾಡುವವರು ಎಲ್ಲರನ್ನೂ ತನ್ನತ್ತ ಬರ ಸೆಳೆಯುತ್ತದೆ.



ಬೆಂಗಳೂರು ಆಧುನಿಕ ಮಹಾನಗರವಾಗಿ ವಿಕಸನಗೊಳ್ಳುತ್ತಿರುವಾಗ, ಈ ದೊಡ್ಡ ಗಣಪತಿ ದೇವಸ್ಥಾನವು ಆಳವಾಗಿ ಬೇರೂರಿರುವ ಸಂಪ್ರದಾಯಗಳು ಮತ್ತು ಅಚಲವಾದ ಭಕ್ತಿಯ ದೃಢವಾದ ಜ್ಞಾಪನೆಯಾಗಿ ಉಳಿದಿದೆ. ಇದು ಹಿಂದಿನ ಮತ್ತು ವರ್ತಮಾನದ ಸಹಬಾಳ್ವೆಯ ಸ್ಥಳವಾಗಿ, ಭೇಟಿ ನೀಡುವ ಎಲ್ಲರಿಗೂ ಸಾಂತ್ವನ, ಸ್ಫೂರ್ತಿ ಮತ್ತು ಅದ್ಭುತ ಭಾವನೆಯನ್ನು ನೀಡುತ್ತಲಿದೆ.


1 Comment


Sudarshan Ganapathi
Sudarshan Ganapathi
Aug 24, 2023

Excellent article with history narrated. Beautiful pictures.

Like
bottom of page