top of page
HCM

ಸೋಣೆ ಜೋಗಿ

ಸುಂದರವಾದ, ಸೊಂಪಾದ ಪಶ್ಚಿಮ ಘಟ್ಟಗಳ ನಡುವೆ ನೆಲೆಸಿ ತನ್ನದೇ ಆದ ಸುದೀರ್ಘ ಪರಂಪರೆಯನ್ನು ಹೊಂದಿರುವ ಕರ್ನಾಟಕದ ತುಳುನಾಡಿನಲ್ಲಿ, ಸೋಣೆ ಜೋಗಿಗಳು ಎಂದು ಕರೆಯಲ್ಪಡುವ ವಿಶಿಷ್ಟ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾದ ಸಮುದಾಯ ಒಂದು ಇದೆ. ಈ ರೋಮಾಂಚಕ ಗುಂಪು ಈ ಪ್ರದೇಶದ ಕಲಾತ್ಮಕ ಪರಂಪರೆಗೆ ಕೊಡುಗೆ ನೀಡಿರುವುದು ಮಾತ್ರವಲ್ಲದೆ, ದಕ್ಷಿಣ ಕನ್ನಡದ ಆತ್ಮವನ್ನು ಪ್ರತಿಬಿಂಬಿಸುವ ಪ್ರಾಚೀನ ಸಂಪ್ರದಾಯಗಳನ್ನು ಎತ್ತಿಹಿಡಿದಿದೆ.


ಮೂಲ ಮತ್ತು ಇತಿಹಾಸ

ಸೋಣೆ ಜೋಗಿಗಳು, ತಮ್ಮ ಮೂಲವನ್ನು ಹಲವಾರು ಶತಮಾನಗಳ ಹಿಂದೆ ತುಳುನಾಡಿಗೆ ವಲಸೆ ಬಂದ ಅಲೆಮಾರಿ ಬುಡಕಟ್ಟು ಜನಾಂಗದವರೊಂದಿಗೆ ಗುರುತಿಸುತ್ತಾರೆ. ಅವರ ನಿಖರವಾದ ಮೂಲಗಳು ಇತಿಹಾಸದಲ್ಲಿ ಮುಚ್ಚಿಹೋಗಿವೆಯಾದರೂ, ಪ್ರದೇಶದ ಸಾಂಸ್ಕೃತಿಕ ಭೂದೃಶ್ಯದ ಮೇಲೆ ಅವರ ಪ್ರಭಾವವನ್ನು ನಿರಾಕರಿಸಲಾಗದು.


ಸೋಣೆ ಜೋಗಿಯ ಮನೆ ಬಾಗಿಲಿನ ನೃತ್ಯ

ತುಳುನಾಡಿನಲ್ಲಿ ಆಷಾಢ(ಆಟಿ) ಕಳೆದು ಬರುವ ತಿಂಗಳೇ ಸೋಣೆ (ಸಾಧಾರಣವಾಗಿ ಆಗಸ್ಟ್16 ರಿಂದ ಸೆಪ್ಟೆಂಬರ್ 16 ರವರೆಗೆ). ಆಟಿಯು ನಿಷೇಧಿತ ತಿಂಗಳಾಗಿದ್ದರೆ, ಸೋಣೆಯನ್ನು ಮಂಗಳಕರ ಮಾಸವೆಂದು ಪರಿಗಣಿಸಿ, ಅನೇಕ ಹಬ್ಬಗಳನ್ನು ಆಚರಿಸ ಲಾಗುತ್ತದೆ. ಸೋಣೆ ಸಂಕ್ರಾಂತಿ ತುಳುನಾಡಿನ ಪ್ರಮುಖ ಹಬ್ಬ. ಆಟಿ ಮಾಸದಲ್ಲಿ ಮುಚ್ಚಿದ್ದ ಎಲ್ಲಾ ದೇವಸ್ಥಾನಗಳನ್ನು ಸೋಣೆ ಸಂಕ್ರಮಣದಲ್ಲಿ ತೆರೆದು ನಿಯಮಿತ ಪೂಜೆಗಳು ಪ್ರಾರಂಭವಾಗುತ್ತವೆ. ಆಟಿ ಮಾಸದಲ್ಲಿ ಆಟಿಕಳೆಂಜ ಕಾಣಿಸಿಕೊಂಡರೆ, ಸೋಣೆ ಮಾಸದ ವಿಶೇಷ ಜೋಗಿ ಅಥವಾ ಜೋಗಿ ಪುರುಷ ನೃತ್ಯ. ವಿಶೇಷವಾಗಿ ನಲಿಕೆ ಜಾತಿಯ ಜನರು, ಜೋಗಿ ವೇಷ ಹಾಕಿ ಅನೇಕ ಗ್ರಾಮಗಳಲ್ಲಿ ತಿರುಗುತ್ತಾ ಪ್ರತಿ ಮನೆಗೆ ಹಗಲು ಹೊತ್ತು ಕುಣಿದಾಡಿಕೊಂಡು ಭೇಟಿಕೊಡುವ ವಿಶಿಷ್ಟ ಸಂಪ್ರದಾಯವೇ ಸೋಣೆ ಜೋಗಿ ಕುಣಿತ.

ಸಾಮಾನ್ಯವಾಗಿ ಜೋಗಿ ಕುಣಿತದಲ್ಲಿ ಇಬ್ಬರು ಪ್ರಧಾನ ಪಾತ್ರ (ನೃತ್ಯ ಮಾಡುವವ ಮತ್ತು ಪಕ್ಕವಾದ್ಯ ಬಾರಿಸುವವ) ವಹಿಸುತ್ತಾರೆ. ವಾದ್ಯಗಾರ ಬಿಳಿ ಲುಂಗಿ ಉಟ್ಟುಕೊಂಡು ಹೆಗಲಿಗೊಂದು ಬೈರಾಸು ಧರಿಸಿ, ಕೆಲವೊಮ್ಮೆ ತಲೆಗೆ ಮುಟ್ಟಾಳೆಯನ್ನು (ಕಿಲ್ಲಿ) ಹಾಕಿಕೊಂಡು, ಕೈಯಲ್ಲಿ ಡೋಲು ಬಾರಿಸುತ್ತ ಜನಪದ ಹಾಡುಗಳನ್ನು ತುಳು ಭಾಷೆಯಲ್ಲಿ ಹಾಡುತ್ತಿರುತ್ತಾನೆ. ಜೋಗಿಯ ವೇಷ ವರ್ಣಮಯವಾಗಿದ್ದು, ಹೆಚ್ಚಾಗಿ ಕೆಂಪು ಬಣ್ಣದ ಸೀರೆಯನ್ನು ಲಂಗದ ರೀತಿಯಲ್ಲಿ ಹುಟ್ಟುಕೊಂಡು, ಅದರ ಮೇಲೆ ಬಿಳಿ ಬಟ್ಟೆಯನ್ನು ಸುತ್ತಿಕೊಂಡು, ಮಾಲೆ ಕಂಠಾಭರಣಗಳಿಂದ ಅಲಂಕರಿಸಿಕೊಂಡು, ಕೈಯಲ್ಲಿ ಗಂಟಾಮಣಿ ಮತ್ತು ಎರಡೂ ಬದಿ ತೆಂಗಿನಗರಿ ಕಟ್ಟಲ್ಪಟ್ಟ ಕೋಲನ್ನು ಹಿಡಿದು, ತಲೆಗೆ ವಿಚಿತ್ರ ಬಾಳೆ ಎಲೆಯಿಂದ ಮಾಡಲ್ಪಟ್ಟ ಟೋಪಿ ಧರಿಸಿದ್ದು ನೋಡುಗರ ಕಣ್ಮನ ಗಳನ್ನು ಸೆಳೆಯುತ್ತದೆ. ಈ ವೇಷಭೂಷಣಗಳಲ್ಲಿ ಕೆಲವೊಮ್ಮೆ ಬದಲಾವಣೆಗಳನ್ನು ಕಾಣಬಹುದು.


ಜೋಗಿ ತನ್ನಲ್ಲಿರುವ ಕೋಲನ್ನು ಹಿಡಿದು ಮಾಡುವ ನೃತ್ಯ ನೋಡಲು ಬಲು ಚಂದ. ಸೋಣೆ ಜೋಗಿಗಳ ಈ ನೃತ್ಯವು ಸಂಕೀರ್ಣವಾದ ಚಲನೆಗಳು ಮತ್ತು ಸನ್ನೆಗಳನ್ನು ಒಳಗೊಂಡಿದೆ. ಇವರ ಚಲನೆಯು ಪ್ರಾರ್ಥನೆಯ ಒಂದು ರೂಪವಾಗಿದ್ದು, ಪ್ರತಿಯೊಂದು ಹೆಜ್ಜೆ ಮತ್ತು ಭಾವಭಂಗಿಗಳು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ತಮ್ಮ ಮಕ್ಕಳೊಂದಿಗೆ ವರ್ಣರಂಜಿತ ಉಡುಪುಗಳು ಮತ್ತು ಆಭರಣಗಳನ್ನು ಧರಿಸಿ ಸಂಗೀತ ವಾದ್ಯವನ್ನು ನುಡಿಸುತ್ತಾ, ನೃತ್ಯ ಮಾಡುತ್ತ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿನವರಿಗೆ ಕಲಿಸುತ್ತಾರೆ.


ಸೋಣೆ ಜೋಗಿ ತಮ್ಮ ಮನೆ ಬಾಗಿಲಲ್ಲಿ ಕಾಣಿಸಿಕೊಂಡಾಗ, ತುಳಸಿಕಟ್ಟೆಯ ಬಳಿ ಮರದ ತಟ್ಟೆಯಲ್ಲಿ ಸಿದ್ಧವಾಗಿಟ್ಟಿದ್ದ ದಾನ ವಸ್ತುಗಳನ್ನು(ಅಕ್ಕಿ, ಕಾಯಿ, ಮೆಣಸು ಇತ್ಯಾದಿಗಳನ್ನು) ಜನರು ಕೊಡುತ್ತಾರೆ. ಈ ತಟ್ಟೆಯಲ್ಲಿ ಇದ್ದಿಲು, ನೀರು ತುಂಬಿದ ಮಡಕೆ, ಭತ್ತ ಮತ್ತು ದೀಪವನ್ನು ಇಟ್ಟಿರುತ್ತಾರೆ. ಜೋಗಿಯು ಇದ್ದಿಲಿನ ನೀರನ್ನು ನೆಲದ ಮೇಲೆ ಸಿಂಪಡಿಸಿ, ದಾನಿ ಮತ್ತು ಮನೆಯ ಜನರನ್ನು ಆಶೀರ್ವದಿಸಿ ಮತ್ತೊಂದು ಮನೆಯ ಕಡೆಗೆ ಹೋಗುತ್ತಾನೆ. ಸೋಣೆ ಜೋಗಿಗಳು ಮನೆ ಬಾಗಿಲಿನಲ್ಲಿ ಮಾಡುವ ನೃತ್ಯ ದೈವಿಕತೆಯೊಂದಿಗೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಸ್ಥಾಪಿಸಿ, ಅವರ ಮನೆ ಮತ್ತು ಕುಟುಂಬದವರಿಗೆ ಧನಾತ್ಮಕ ಶಕ್ತಿ ಮತ್ತು ಆಶೀರ್ವಾದವನ್ನು ತರುತ್ತದೆ ಎಂದು ನಂಬಲಾಗಿದೆ.


ಸವಾಲುಗಳು ಮತ್ತು ಸಂರಕ್ಷಣೆ

ದಕ್ಷಿಣ ಕನ್ನಡದ ಸಾಂಸ್ಕೃತಿಕ ಪರಂಪರೆಗೆ ಸೋಣೆ ಜೋಗಿಗಳು ತಮ್ಮ ಅಮೂಲ್ಯ ಕೊಡುಗೆಗಳ ಹೊರತಾಗಿಯೂ, ಆಧುನಿಕ ಯುಗದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕ್ಷಿಪ್ರ ನಗರೀಕರಣ, ಬದಲಾಗುತ್ತಿರುವ ಆರ್ಥಿಕ ಅವಕಾಶಗಳು ಮತ್ತು ಸಾಮಾಜಿಕ ರೂಢಿಗಳಲ್ಲಿನ ಪಲ್ಲಟಗಳು ಅವರ ಸಾಂಪ್ರದಾಯಿಕ ಜೀವನ ವಿಧಾನವನ್ನು ಅಪಾಯಕ್ಕೆ ಸಿಲುಕಿಸಿದೆ.


ಸಾಂಸ್ಕೃತಿಕ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ಮನೆ ಬಾಗಿಲಿಗೆ ಕುಣಿತ ಸೇರಿದಂತೆ ಸೋಣೆ ಜೋಗಿ ಪರಂಪರೆಯನ್ನು ದಾಖಲು ಮಾಡಿ ಉಳಿಸುವ ಪ್ರಯತ್ನ ನಡೆಯುತ್ತಿದೆ. ಉಪಕ್ರಮಗಳಲ್ಲಿ ನೃತ್ಯದ ಚಲನೆಗಳು ಮತ್ತು ಮಹತ್ವವನ್ನು ದಾಖಲಿಸುವುದು, ಪ್ರದರ್ಶನಗಳ ಮೂಲಕ ಅವರ ಕಲಾ ಪ್ರಕಾರಗಳನ್ನು ಉತ್ತೇಜಿಸುವುದು ಮತ್ತು ಆರ್ಥಿಕ ಸುಸ್ಥಿರತೆಗೆ ಅವಕಾಶಗಳನ್ನು ಒದಗಿಸುವುದು ಸೇರಿವೆ.


ಕೊನೆ ಮಾತು

ದಕ್ಷಿಣ ಕನ್ನಡವು ವಿಕಸನ ಮತ್ತು ಆಧುನೀಕರಣವನ್ನು ಮುಂದುವರೆಸುತ್ತಿರುವಂತೆ, ಸೋಣೆ ಜೋಗಿ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುವುದು ಮತ್ತು ಅವರ ಮನಮೋಹಕ ಮನೆಬಾಗಿಲಿನ ನೃತ್ಯವನ್ನು ಬೆಂಬಲಿಸುವುದು ನಿರ್ಣಾಯಕವಾಗಿದೆ. ಹಾಗೆ ಮಾಡುವುದರಿಂದ, ಅವರ ಮೌಲ್ಯಗಳನ್ನು ಗೌರವಿಸುವುದು ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗಳಿಗೆ ಸಂಪ್ರದಾಯ, ಕಲೆ, ಆಧ್ಯಾತ್ಮಿಕತೆ ಮತ್ತು ನೃತ್ಯದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಕೊಡುಗೆಯಾಗಿ ನೀಡಬಹುದು.


ಮಾಹಿತಿ: ಪೂರ್ಣಿಮಾ, ಸುದರ್ಶನ್


115 views1 comment

1 comentario


Sudarshan Ganapathi
Sudarshan Ganapathi
30 ago 2023

Excellent writeup. Well researched. Though I saw SoNe jogi in childhood I did not know the details that you gathered.

Me gusta
bottom of page