ಬೆಂಗಳೂರಿನ ಹನುಮಂತನಗರದ ಗದ್ದಲದ ಬೀದಿಗಳ ಮಧ್ಯೆ ಅಪ್ರಜ್ಞಾಪೂರ್ವಕವಾಗಿರುವ ಹರಿಹರ ಗುಡ್ಡ, ಹರಿಹರೇಶ್ವರ ದೇವಾಲಯ ಮತ್ತು ಕಲ್ಲಿನ ಛತ್ರಿಯು ಶತಮಾನಗಳ ಇತಿಹಾಸ ಮತ್ತು ಅದರ ಕಥೆಗಳನ್ನು ಪಿಸುಗುಟ್ಟುತ್ತಾ ನಗರದ ಶ್ರೀಮಂತ ಪರಂಪರೆಯ ಮೂಕ ಕಾವಲುಗಾರರಂತೆ ನಿಂತಿವೆ.
ಐತಿಹಾಸಿಕ ಕಣ್ಣೋಟ
ಕೆಂಪೇಗೌಡರ ವಂಶಸ್ಥರು ಅಳುತಿದ್ದಂತಹ ಬೆಂಗಳೂರನ್ನು ಬಿಜಾಪುರದ ಆದಿಲ್ ಶಾಹಿ ಸುಲ್ತಾನರು 1638ರಲ್ಲಿ ವಶಪಡಿಸಿಕೊಂಡು, ಅದನ್ನು ತಮ್ಮ ಸೇನಾ ನಾಯಕನಾಗಿದ್ದ ಶಹಾಜಿ ಮಾಲೋಜಿ ಭೋಂಸ್ಲೆಗೆ ಜಹಗೀರಾಗಿ ಕೊಟ್ಟರು. ತರುವಾಯ ಶಹಾಜಿಯು ನಗರವನ್ನು ಆದಿಲ್ ಶಾಹಿ ಸುಲ್ತಾನರ ದಕ್ಷಿಣದ ಸೇನಾ ಮುಖ್ಯಕೇಂದ್ರವಾಗಿ ಅಭಿವೃದ್ಧಿಪಡಿಸಿ ಆಳುತ್ತಿದ್ದರು. ಈ ಶಹಾಜಿ ಭೋಂಸ್ಲೆ ಯಾರು ಗೊತ್ತೇ? ಭಾರತ ಕಂಡ ಅಪ್ರತಿಮ ಸೇನಾನಿ, ಮರಾಠ ಸಾಮ್ರಾಜ್ಯದ ನಿರ್ಮಾತೃ ಛತ್ರಪತಿ ಶಿವಾಜಿಯ ತಂದೆ.
ಶಿವಾಜಿಯ ಬೆಂಗಳೂರಿನ ಆ ದಿನಗಳು
ಶಿವಾಜಿಯು ತನ್ನ ಬಾಲ್ಯದ ಕೆಲ ಸಮಯವನ್ನು ಬೆಂಗಳೂರಿನಲ್ಲಿ ಕಳೆದದ್ದು ತಿಳಿಯುತ್ತದಾದರೂ ಅದರ ವಿವರಗಳು ಸೀಮಿತವಾಗಿವೆ. ಚಾರಿತ್ರಿಕ ದಾಖಲೆಗಳ ಪ್ರಕಾರ ಸುಮಾರು 1640 ರಿಂದ 1642ರ ನಡುವೆ ಶಿವಾಜಿಯು ತನ್ನ ತಾಯಿ ಜೀಜಾಬಾಯಿಯೊಡನೆ ಬೆಂಗಳೂರಿಗೆ ತನ್ನ ತಂದೆ ಶಹಾಜಿಯನ್ನು ನೋಡಲು ಬರುತ್ತಾನೆ. ಆಗ ಶಹಾಜಿ ತಮ್ಮ ಎರಡನೇ ಪತ್ನಿ ತುಕಾ ಬಾಯಿ ಮತ್ತು ಮಗ ವ್ಯಾಂಕೋಜಿ (ಏಕೋಜಿ) ಜೊತೆ ಬೆಂಗಳೂರಲ್ಲಿ ವಾಸವಾಗಿದ್ದರು.
ಇತಿಹಾಸಕಾರ ಸರ್ ಜಾದುನಾಥ್ ಸಿರ್ಕಾರ್ ಅವರು ದಾಖಲಿಸಿರುವಂತೆ, ಜೀಜಾಬಾಯಿಯು ತನ್ನ ಪತಿಗೆ ಪತ್ರ ಬರೆದು ಅದರಲ್ಲಿ 12ನೇ ವಯಸ್ಸಿನ ಶಿವಾಜಿಯು ಕುಲೀನ ಮರಾಠರಿಗೆ ಸೂಕ್ತವಾದ ಮದುವೆಯ ವಯಸ್ಸನ್ನು ಮೀರಿ ಹೋಗಿದ್ದಾನೆ ಎಂದು ತಿಳಿಸುತ್ತಾರೆ. ಶಹಾಜಿಯು ತಮ್ಮ ಮಗನಾದ ಶಿವಾಜಿಯನ್ನು ಬೆಂಗಳೂರಿಗೆ ಕರೆತರಲು ಜೀಜಾಬಾಯಿಗೆ ಹೇಳಲು ಬಹುಶಃ ಈ ಪತ್ರವೇ ಕಾರಣವಾಗಿರಬಹುದು.
ಕೆಲ ಸಮಯದ ನಂತರ ಶಿವಾಜಿಯ ಮದುವೆಯು ಸಾಯಿಬಾಯಿ ನಿಂಬಾಳ್ಕರ್ ಜೊತೆ ಇಂದಿನ ಚಿಕ್ಕಪೇಟೆ ಪ್ರದೇಶದಲ್ಲಿದ್ದ ಗೌರಿ ಮಹಲ್ ನಲ್ಲಿ ಜರಗುತ್ತದೆ. ಶಿವಾಜಿಯ ಮದುವೆಯು ಈ ಮೊದಲೇ ಪುಣೆಯ ಲಾಲ್ ಮಹಲ್ ನಲ್ಲಿ ತಂದೆಯ ಅನುಪಸ್ಥಿತಿಯಲ್ಲಿ ನಡೆದಿತ್ತೆಂದೂ, ನಂತರ ಬೆಂಗಳೂರಲ್ಲಿ ಪುನಃ ಮಾಡಲಾಯಿತು ಎಂಬುದು ಕೆಲವರ ಅಭಿಪ್ರಾಯ. ಈ ಗೌರಿ ಮಹಲ್ ಶಿಥಿಲಗೊಂಡಿರುವ ಚಿಕ್ಕಪೇಟೆಯ ಮೋಹನ್ ಬಿಲ್ಡಿಂಗ್ಸ್ ಮತ್ತು ವಿಜಯಲಕ್ಷ್ಮಿ ಥಿಯೇಟರ್ ಇರುವ ಸ್ಥಳದಲ್ಲಿ, ಕೆಂಪೇಗೌಡರು ನಿರ್ಮಿಸಿದ್ದ ಹಳೆಯ ಅರಮನೆಯೊಳಗೆ ಇತ್ತು ಎಂದು ಇತಿಹಾಸಕಾರ ಎಂ. ಫಜಲುಲ್ ಹಸನ್ ಉಹಿಸುತ್ತಾರೆ.
ಯುವ ಶಿವಾಜಿಯು ತಮ್ಮ ಬೆಂಗಳೂರಿನ ವಾಸ್ತವ್ಯದ ದಿನಗಳಲ್ಲಿ ನಗರದ ವಿಶಿಷ್ಟ ಸಾಮಾಜಿಕ-ಸಾಂಸ್ಕೃತಿಕ ನೀತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾ, ಮೈಸೂರಿನ ಕಂಠೀರವ ನರಸರಾಜರ ಆಡಳಿತಾತ್ಮಕ ಉಪಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ಬೆಳಸಿಕೊಂಡಿದ್ದನು. ಈ ಕೆಲವು ಗ್ರಹಿಕೆಗಳನ್ನು ಮುಂದೆ ತಮ್ಮ ಮರಾಠ ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ಅಳವಡಿಸಿಕೊಂಡಿರುವುದು ಕಂಡುಬರುತ್ತದೆ.
ಹರಿಹರೇಶ್ವರ ದೇವಾಲಯ
ತಮ್ಮ ಶೌರ್ಯ ಮತ್ತು ಆಳ್ವಿಕೆಗೆ ಹೆಸರುವಾಸಿಯಾಗಿದ್ದ ಮರಾಠರು, ತಮ್ಮ ನಂಬಿಕೆ ಹಾಗೂ ಭಕ್ತಿಯ ಸಮರ್ಪಣೆಯಾಗಿ ಹರಿಹರ ಗುಡ್ಡದ ಶಿಖರದ ಮೇಲೆ ಹರಿಹರೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ.
ಈ ದೇವಾಲಯದ ವೈಶಿಷ್ಟ್ಯವೇನೆಂದರೆ, ಒಂದೇ ಗರ್ಭಗುಡಿಯಲ್ಲಿ ಎರಡು ಪ್ರಮುಖ ದೇವತೆಗಳಾದ ಶಿವ ಮತ್ತು ವಿಷ್ಣುವಿನ ದೈವಿಕ ಶಕ್ತಿಗಳನ್ನು ಒಂದೇ ಲಿಂಗದಲ್ಲಿ ಸಮ್ಮಿಲನ ಗೊಳಿಸಲಾಗಿದೆ. ಇದು ವೈವಿಧ್ಯಮಯ ಧಾರ್ಮಿಕ ಸಂಪ್ರದಾಯಗಳ ಸಾಮರಸ್ಯದ ಸಹಬಾಳ್ವೆಯನ್ನು ಸಂಕೇತಿಸುತ್ತದೆ. ದೇವಾಲಯದ ಒಳಾಂಗಣದಲ್ಲಿ ಹರಿಹರೇಶ್ವರ ಲಿಂಗ, ಬಾಲಸುಬ್ರಹ್ಮಣ್ಯ ಮತ್ತು ವಿಷ್ಣುವಿನ ಮೂರ್ತಿಗಳನ್ನು ಒಂದೇ ಸಾಲಿನಲ್ಲಿರುವ ಮೂರು ಗುಡಿಗಳಲ್ಲಿ ಸ್ಥಾಪಿಸಲಾಗಿದೆ. ಇಲ್ಲಿನ ವಾಸ್ತುಶಿಲ್ಪವು ದ್ರಾವಿಡ ಮತ್ತು ಮರಾಠ ಶೈಲಿಗಳ ಮಿಶ್ರಣವಾಗಿದ್ದು, ಗೊಮ್ಮಟಕಾರದ ಗೋಪುರ ಮತ್ತು ವಿಶಾಲವಾದ ಪ್ರಾಂಗಣದಿಂದ ಕೂಡಿದೆ. ದೇಗುಲದ ಸುತ್ತಲಿನ ಹೊರಗೋಡೆಯು ಕೆಂಪು ಮತ್ತು ಗೋಪಿ ಬಣ್ಣದ ಉದ್ದನೆಯ ಪಟ್ಟಿಗಳಿಂದ ಅಲಂಕೃತವಾಗಿದ್ದು, ಮುಂದೆ ಅರಳಿಕಟ್ಟೆ ಮತ್ತು ನಾಗರಕಲ್ಲುಗಳಿವೆ. ಸುತ್ತಲಿನ ಉದ್ಯಾನವನ ಎರಡು ಹಂತಗಳಲ್ಲಿದ್ದು ವಾಯುಸೇವನೆಗೆ ಬರುವವರಿಗೆ ಅನುಕೂಲವಾಗಿದೆ.
ಹರಿಹರೇಶ್ವರ ದೇವಾಲಯ ಕಾಲಕ್ರಮೇಣ ಶಿಥಿಲಗೊಂಡು ನಿರ್ಲಕ್ಷಕ್ಕೆ ಒಳಗಾಗಿತ್ತು. 1976ರಲ್ಲಿ ಶ್ರೀ ಮಗಜಿ ಧೋಂಡೂಸಾ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಮುನ್ನಾಬಾಯಿಯವರು ಗುಡ್ಡಕ್ಕೆ ಹೋಗಲು ಸುಗಮವಾದ ರಸ್ತೆ, ಮೆಟ್ಟಿಲುಗಳು ಮತ್ತು ಸುಭದ್ರವಾದ ತಡೆ ನಿರ್ಮಿಸಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ಗುಡ್ಡದ ಕೆಳಹಂತದಲ್ಲಿ ಕೆಂಪೇಗೌಡರ ಕಾಲದ ಕಾವಲು ಗೋಪುರ ಮತ್ತು ಅದಕ್ಕೆ ಎದುರಾಗಿ ಅವರ ಸಾಮ್ರಾಜ್ಯದ ದ್ಯೋತಕವಾದ ನಂದಿವಿಗ್ರಹ ಕಾಣಸಿಗುತ್ತದೆ.
ಕಲ್ಲಿನ ಛತ್ರಿ
ದೇವಾಲಯದ ಎಡ ಬದಿಯಲ್ಲಿ ವಿಸ್ಮಯಕರವಾದ ಒಂದೇ ಬೃಹತ್ ಗ್ರಾನೈಟ್ ಬಂಡೆಯಲ್ಲಿ ಕೆತ್ತಲಾದ ಅಲಂಕೃತವಾದ ದೊಡ್ಡ ಕಲ್ಲಿನ ಕಲ್ಲಿನ ಛತ್ರಿ ಕಂಡುಬರುತ್ತದೆ. ಮೊದಲ ನೋಟಕ್ಕೆ ಇದು ಇತ್ತೀಚೆಗೆ ನಿರ್ಮಿಸಿದಂತೆ ಭಾಸವಾಗುತ್ತದೆ. ಜೇಮ್ಸ್ ಹಂಟರ್ ಎಂಬ ಬ್ರಿಟಿಷ್ ಮಿಲಿಟರಿ ಕಲಾವಿದ ಸುಮಾರು 1805ರಲ್ಲಿಯೇ ಚಿತ್ರಿಸಿರುವ ಗವಿಗಂಗಾಧರೇಶ್ವರ ದೇವಾಲಯದ ಕಲಾಕೃತಿಯ ಬಲಭಾಗದ ಮೇಲ್ತುದಿಯಲ್ಲಿ ಈ ಛತ್ರಿಯನ್ನು ಕಾಣಬಹುದು. ಆ ಚಿತ್ರದ ಆಧಾರದ ಮೇಲೆ ಇದನ್ನು ಗುರುತಿಸಿ, ಇದರ ಐತಿಹಾಸಿಕ ಮಹತ್ವವನ್ನು ಮುನ್ನೆಲೆಗೆ ತಂದು ಈಗ ಸಂರಕ್ಷಿಸಲಾಗಿದೆ. ಆದಾಗ್ಯೂ ಅದರ ಮೇಲೆ ತಮ್ಮ ಹೆಸರು ಇತ್ಯಾದಿಗಳನ್ನು ಬರೆದು ಸ್ವಲ್ಪಮಟ್ಟಿಗೆ ವಿರೂಪಗೊಳಿಸಲಾಗಿದೆ.
Source: Wikimedia Commons
ನಗರದ ಆಧುನಿಕತೆಯ ಮಧ್ಯೆ ಈ ದೇವಾಲಯ ಮತ್ತು ಕಲ್ಲಿನ ಛತ್ರಿಯು ಆಧ್ಯಾತ್ಮಿಕ ಅನ್ವೇಷಕರು ಮತ್ತು ಇತಿಹಾಸದ ಉತ್ಸಾಹಿಗಳಿಗೆ ಕಥೆಗಳನ್ನು ಹೇಳುತ್ತಾ, ತನ್ನ ರೋಮಾಂಚಕ ಭೂತಕಾಲವನ್ನು ಮುಂದಿನ ತಲೆಮಾರುಗಳಿಗೆ ಸ್ಫೂರ್ತಿದಾಯಕವಾಗಿಸುತ್ತಾ ಸಾಗಿದೆ.
Excellent. Never knew all these places though I am living in Bengaluru for more than 25 years, visited Basavanagudi area multiple times. Well written. Thank you Mahesh.